ಕೊಲಂಬೋ ಯೋಜನೆ

ದಕ್ಷಿಣ ಮತ್ತು ಆಗ್ನೇಯ ಏಷ್ಯದಲ್ಲಿ ಪರಸ್ಪರ ಸಹಕಾರದಿಂದ ಆರ್ಥಿಕ ಅಭಿವೃದ್ಧಿ ಸಾಧಿಸಲು ರೂಪಿತವಾದ ಯೋಜನೆ, ಸಂಸ್ಥೆ. ಸಂಸ್ಥೆಯ ಕೇಂದ್ರ ಕಚೇರಿ ಇರುವುದು ಕೊಲಂಬೋದಲ್ಲಿಯಾದ್ದರಿಂದ ಇದಕ್ಕೆ ಕೊಲಂಬೋ ಯೋಜನೆಯೆಂಬ ಹೆಸರು ಬಂದಿದೆ. ಕಾಮನ್‍ವೆಲ್ತ್ ಕೂಟದಿಂದ 1950ರಲ್ಲಿ ಸ್ಥಾಪಿತವಾಯಿತು. ಆಗ್ನೇಯ ಏಷ್ಯದ ರಾಷ್ಟ್ರಗಳೂ ಜಪಾನ್ ಅಮೆರಿಕ ಸಂಯುಕ್ತಸಂಸ್ಥಾನವೂ ಅನಂತರ ಇದಕ್ಕೆ ಸೇರಿಕೊಂಡುವು. ಆಫ್ಘಾನಿಸ್ತಾನ, ಭೂತಾನ, ಬರ್ಮ, ಕಾಂಬೋಡಿಯ, ಶ್ರೀಲಂಕಾ, ಭಾರತ, ಇಂಡೊನೇಷ್ಯ, ಇರಾನ್, ದಕ್ಷಿಣ ಕೊರಿಯ, ಲಾವೋಸ್, ಮಲೇಷ್ಯ, ಮಾಲ್ಡಿವ್ ದ್ವೀಪಗಳು, ನೇಪಾಳ, ಪಾಕಿಸ್ತಾನ, ಫಿಲಿಪೀನ್ಸ್, ಸಿಂಗಪುರ, ಥೈಲೆಂಡ್, ವಿಯೆಟ್ನಾಂ ಗಣರಾಜ್ಯ-ಇವು ಈ ಪ್ರದೇಶದ ಒಳಗಿರುವ ಸದಸ್ಯ ರಾಷ್ಟ್ರಗಳು. ಹೊರಗಿನ ಸದಸ್ಯ ರಾಷ್ಟ್ರಗಳು ಇವು; ಆಸ್ಟ್ರೇಲಿಯ, ಕೆನಡ, ಜಪಾನ್, ನ್ಯೂಜಿûಲೆಂಡ್, ಬ್ರಿಟನ್, ಅಮೆರಿಕ ಸಂಯುಕ್ತಸಂಸ್ಥಾನ. ಏಷ್ಯ ಉತ್ಪಾದಕತಾ ಸಂಸ್ಥೆ, ವಿಶ್ವಬ್ಯಾಂಕು, ವಿಶ್ವಸಂಸ್ಥೆಯ ಏಷ್ಯ ಮತ್ತು ದೂರಪ್ರಾಚ್ಯ ಆರ್ಥಿಕ ಆಯೋಗ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ಕಾಮನ್‍ವೆಲ್ತ್ ಕಾರ್ಯಾಲಯ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಏಷ್ಯನ್ ಅಭಿವೃದ್ಧಿ ಬ್ಯಾಂಕು, ವ್ಯಾಪಾರ ಸುಂಕಗಳ ಸಾಮಾನ್ಯ ಒಪ್ಪಂದ ಸಂಸ್ಥೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ-ಇವು ವೀಕ್ಷಕ ಸಂಸ್ಥೆಗಳು.

	ಸದಸ್ಯ ರಾಷ್ಟ್ರಗಳ ಸರ್ಕಾರಗಳ ಸಚಿವಮಟ್ಟದ ಪ್ರತಿನಿಧಿಗಳನ್ನುಳ್ಳ ಸಮಾಲೋಚನ ಸಮಿತಿ (ಕನ್ಸಲ್ಟೆಟಿವ್ ಕಮಿಟಿ) ಕೊಲಂಬೋ ಯೋಜನೆಯ ಉನ್ನತ ನಿರ್ದೇಶಕ ಅಂಗ. ಇದು ವರ್ಷಕ್ಕೊಮ್ಮೆ ಬೇರೆಬೇರೆ ದೇಶಗಳಲ್ಲಿ ಸಭೆ ಸೇರುತ್ತದೆ. ಸದಸ್ಯ ರಾಷ್ಟ್ರಗಳು ಸಲ್ಲಿಸಿದ ವರದಿಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ. ಬಂಡವಾಳನೆರವು ಮತ್ತು ತಾಂತ್ರಿಕ ಸಹಕಾರ ಯೋಜನೆಗಳ ಕೇಂದ್ರೀಯ ಸಂಯೋಜನೆಯ ಕಾರ್ಯ ನಡೆಯುವುದು ಈ ಸಮಿತಿಯಿಂದ. ಎಲ್ಲ ಸದಸ್ಯರಿಗೂ ಸಮಾನ ಅಧಿಕಾರ, ಹೊಣೆ ಇರುತ್ತವೆ. ಕೊಲಂಬೋ ಯೋಜನೆಯ ತಾಂತ್ರಿಕ ಸಹಕಾರ ಮಂಡಲಿ ವರ್ಷದಲ್ಲಿ ಹಲವಾರು ಬಾರಿ ಸಭೆ ಸೇರುತ್ತದೆ. ಯೋಜನೆಯ ಸ್ಥೂಲ ಸೂತ್ರಗಳ ಮಿತಿಯೊಳಗೆ ರಾಷ್ಟ್ರಗಳ ತಾಂತ್ರಿಕ ಸಹಕಾರ ಸಾಧಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುವುದು ಇದರ ಉದ್ದೇಶ. ಈ ಬಗ್ಗೆ ಇದಕ್ಕೆ ಸೂಕ್ತ ನಿರ್ದೇಶನ ಬರುವುದು ಸಮಾಲೋಚನ ಸಮಿತಿಯಿಂದ. ಇಡೀ ಕೊಲಂಬೋ ಯೋಜನೆಯ ಪ್ರಚಾರ ಮತ್ತು ಸಮಾಚಾರ ವಿತರಣೆಯ ಕೆಲಸ ನಡೆಸುವುದೂ ತಾಂತ್ರಿಕ ಸಹಕಾರ ಮಂಡಲಿಯ ಕಾರ್ಯಭಾರ. ಕೊಲಂಬೋದಲ್ಲಿ ವಿವಿಧ ಸದಸ್ಯರಾಷ್ಟ್ರಗಳ ರಾಯಭಾರಿಗಳಾಗಿರುವವರು ಸಾಮಾನ್ಯವಾಗಿ ಇದರ ಸದಸ್ಯರಾಗಿರುತ್ತಾರೆ.

	ತಾಂತ್ರಿಕ ಸಹಕಾರ ಮಂಡಲಿಯ ಕಾರ್ಯನಿರ್ವಾಹಕಾರಂಗವೇ ಕೊಲಂಬೋ ಯೋಜನಾ ಬ್ಯೂರೋ. ಬ್ಯೂರೋದ ಕಾರ್ಯಭಾರಗಳು ಇವು: 1. ಯೋಜನೆಯ ಅಡಿಯಲ್ಲಿ ತಾಂತ್ರಿಕ ಸಹಕಾರದ ಸಾಮಾನ್ಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವುದರಲ್ಲಿ ಮಂಡಲಿಗೆ ನೆರವಾಗುವುದು, 2. ದ್ವಿಮುಖ ಒಪ್ಪಂದಗಳ ಪ್ರಕಾರ ನೀಡಲಾದ ಅಥವಾ ಪಡೆಯಲಾದ ತಾಂತ್ರಿಕ ನೆರವಿನ ದಾಖಲೆ ಇಡುವುದು, 3. ತರಬೇತು ಸೌಲಭ್ಯಗಳು, ಪರಿಣತರು ಮತ್ತು ಸಲಕರಣೆಗಳ ಬಗ್ಗೆ ಸದಸ್ಯ ರಾಷ್ಟ್ರ ಸರ್ಕಾರಗಳಿಗೆ ಮಾಹಿತಿ ನೀಡುವುದು. 4. ಯೋಜನೆಯ ಪ್ರದೇಶದ ಒಳಗೆ ಲಭ್ಯವಿರುವ ತರಬೇತು ಸೌಲಭ್ಯಗಳನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ಏರ್ಪಾಡು ಮಾಡುವುದು. 5. ಇಡೀ ಕೊಲಂಬೋ ಯೋಜನೆಯ ಬಗ್ಗೆ ಸಮಾಚಾರ ಒದಗಿಸುವುದು, 6. ಯೋಜನೆಯ ಪ್ರಗತಿಯ ಬಗ್ಗೆ ವರದಿಗಳನ್ನೂ ಅಂಕಿಅಂಶಗಳನ್ನೂ ಪ್ರಕಟಿಸುವುದು ಮತ್ತು 7. ಬಂಡವಾಳನೆರವು ಯೋಜನೆಗಳ ದಾಖಲೆ ಇಡುವುದು.

	ಅಂತರರಾಷ್ಟ್ರೀಯ ರಾಜಕೀಯ ಚಟುವಟಿಕೆಗಳಲ್ಲಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ಆರ್ಥಿಕ ನೆರವು ನೀಡುವುದು ಈಗ ಒಂದು ಅತ್ಯಾವಶ್ಯಕವಾದ ಕರ್ತವ್ಯ ಎಂದು ಭಾವಿಸಲಾಗಿದೆ. ಎರಡನೆಯ ಮಹಾಯುದ್ಧವಾದ ಮೇಲೆ ಅಂತರರಾಷ್ಟ್ರೀಯಮಟ್ಟದಲ್ಲಿ ಆರ್ಥಿಕನೆರವು ನೀಡಿಕೆ ಬಹಳವಾಗಿ ಬೆಳೆದಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಗಳ ಆರ್ಥಿಕಾಭಿವೃದ್ಧಿಯ ಸಮಸ್ಯೆ ಆಗ ಎದ್ದು ಕಾಣುತ್ತಿತ್ತು. ದಕ್ಷಿಣ ಏಷ್ಯದ ಪ್ರಮುಖ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬರ್ಮ, ಶ್ರೀಲಂಕಾ, ಮಲಯ ಮತ್ತು ಸಿಂಗಪುರಗಳು ಹಿಂದೆ ಬ್ರಿಟಿಷ್ ಸಮ್ರಾಜ್ಯಕ್ಕೆ ಒಳಪಟ್ಟಿದ್ದುದರಿಂದ ಅವುಗಳ ಬಡತನಕ್ಕೆ ಬ್ರಿಟನ್ ಬಹುಮಟ್ಟಿಗೆ ಕಾರಣವೆಂಬುದು ಅಂತರರಾಷ್ಟ್ರೀಯ ಕ್ಷೇತ್ರಗಳಲ್ಲಿದ್ದ ಸಾಮಾನ್ಯ ಅಭಿಪ್ರಾಯ. ಆದ್ದರಿಂದ ಅವುಗಳ ಅಭಿವೃದ್ಧಿಗೆ ಬ್ರಿಟನ್ ತಕ್ಕ ಆರ್ಥಿಕ ನೆರವು ನೀಡುವುದು ಅವಶ್ಯಕ ಎಂಬ ಭಾವನೆಯಿತ್ತು. ಅದರ ಪರಿಣಾಮವಾಗಿ 1950ರಲ್ಲಿ ಬ್ರಿಟಿಷ್ ಕಾಮನ್‍ವೆಲ್ತಿಗೆ ಸೇರಿದ ರಾಷ್ಟ್ರಗಳ ವಿದೇಶಾಂಗಮಂತ್ರಿಗಳು ತಮ್ಮ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸಮಸ್ಯೆಗಳನ್ನು ಚರ್ಚಿಸಿ ಒಂದು ನಿರ್ಧಾರ ಕೈಗೊಳ್ಳಲು ಶ್ರೀಲಂಕಾದ (ಆಗ ಸಿಂಹಳ) ರಾಜಧಾನಿಯಾದ ಕೊಲಂಬೋ ನಗರದಲ್ಲಿ ಸಭೆ ಸೇರುವಂತೆ ಬ್ರಿಟನ್ ಏರ್ಪಾಡು ಮಾಡಿತು. ಆ ವೇಳೆಗಾಗಲೇ ಭಾರತ, ಪಾಕಿಸ್ತಾನ, ಮತ್ತು ಶ್ರೀಲಂಕಾಗಳಲ್ಲಿ ತಮ್ಮ ದೇಶಗಳ ಅಭಿವೃದ್ಧಿಗಾಗಿ ಆರ್ಥಿಕ ಯೋಜನೆಗಳನ್ನು ರೂಪಿಸಬೇಕೆಂಬ ಅಭಿಪ್ರಾಯ ಬೆಳೆದಿತ್ತು. ಆದ್ದರಿಂದ ಅಂಥ ಆರ್ಥಿಕ ಯೋಜನೆಗಳನ್ನು ಕೈಗೊಳ್ಳುವಾಗ ಕಾಮನ್‍ವೆಲ್ತಿನ ರಾಷ್ಟ್ರಗಳ ಪೈಕಿ ಆರ್ಥಿಕ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಎಷ್ಟರಮಟ್ಟಿಗೆ ಕಾಮನ್‍ವೆಲ್ತಿನ ಹಿಂದುಳಿದ ದೇಶಗಳಿಗೆ ನೆರವು ನೀಡಬಲ್ಲವು ಎಂಬುದನ್ನು ಕುರಿತು ಚರ್ಚಿಸುವುದೇ ಕೊಲಂಬೋ ಸಮ್ಮೇಳನದ ಉದ್ದೇಶವಾಗಿತ್ತು. ಬ್ರಿಟನ್ ಈ ಸಮ್ಮೇಳನದಲ್ಲಿ ಸಾಕಷ್ಟು ಆಸಕ್ತಿ ವಹಿಸಿತ್ತು. ಆಸ್ಟ್ರೇಲಿಯಕ್ಕೂ ಆಸಕ್ತಿಯಿತ್ತು. ಏಷ್ಯನ್ ರಾಷ್ಟ್ರಗಳಿಗೆ (ಅದರಲ್ಲೂ ಕಾಮನ್‍ವೆಲ್ತ್ ರಾಷ್ಟ್ರಗಳಿಗೆ) ಆರ್ಥಿಕ ನೆರವು ನೀಡುವುದು ತನ್ನ ಕರ್ತವ್ಯ ಎಂದು ಆಸ್ಟ್ರೇಲಿಯ ಭಾವಿಸಿತು. ಪ್ರಾರಂಭದಲ್ಲಿ ಕಾಮನ್‍ವೆಲ್ತ್ ರಾಷ್ಟ್ರಗಳು ಒಟ್ಟಾಗಿ ಸೇರಿ ಒಂದು ಯೋಜನೆಯನ್ನು ತಯಾರಿಸಿದುವು. ದಕ್ಷಿಣ ಹಾಗೂ ಆಗ್ನೇಯ ಏಷ್ಯದಲ್ಲಿ ಪರಸ್ಪರ ಸಹಕಾರದ ಮೂಲಕ ಆರ್ಥಿಕಾಭಿವೃದ್ದಿ ಸಾಧಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಕ್ರಮೇಣ ಏಷ್ಯದ ಇತರ ರಾಷ್ಟ್ರಗಳೂ ಈ ಯೋಜನೆಯಲ್ಲಿ ಭಾಗವಹಿಸಲು ಮುಂದೆ ಬಂದುವು. ಪಾಶ್ಚಾತ್ಯರಾಷ್ಟ್ರಗಳೂ ಕೊಲಂಬೋ ಯೋಜನೆಗೆ ಸೇರಿಕೊಂಡವು.

ಕೊಲಂಬೋ ಯೋಜನೆ ದಕ್ಷಿಣ ಮತ್ತು ಆಗ್ನೇಯ ಏಷ್ಯದ ಪ್ರದೇಶಕ್ಕೆ ಸೇರಿದ ರಾಷ್ಟ್ರಗಳೆಲ್ಲಕ್ಕೂ ಒಟ್ಟಾಗಿ ಅನ್ವಯಿಸುವ ಒಂದು ಅಂತರರಾಷ್ಟ್ರೀಯ ಆರ್ಥಿಕ ಯೋಜನೆಯೆಂದು ಭಾವಿಸಲಾಗದು. ಇಂಥ ಅಂತರರಾಷ್ಟ್ರೀಯ ಯೋಜನಾ ಸಂವಿಧಾನ ಇನ್ನೂ ಬೆಳೆದಿಲ್ಲ. ಈ ಪ್ರದೇಶದಲ್ಲಿರುವ ಒಂದೊಂದು ರಾಷ್ಟ್ರವೂ ತನ್ನದೇ ಆದ ಪಂಚವಾರ್ಷಿಕ ಚತುರ್‍ವಾರ್ಷಿಕ ಅಥವಾ ಷಷ್ಠವಾರ್ಷಿಕ ಯೋಜನೆಯನ್ನು ರೂಪಿಸಿಕೊಂಡಿವೆ. ಇವುಗಳ ವಿವಿಧ ರಾಷ್ಟ್ರೀಯ ಆರ್ಥಿಕ ಯೋಜನೆಗಳಿಗೆ ಕೊಲಂಬೋ ಯೋಜನೆಯ ಸದಸ್ಯರಾಷ್ಟ್ರಗಳು ಸಹಾಯ ನೀಡುತ್ತವೆ. ಇದೊಂದು ಅಂತರರಾಷ್ಟ್ರೀಯ ಸಹಕಾರಪ್ರಯೋಗ. ಈ ಪ್ರದೇಶದ ರಾಷ್ಟ್ರಗಳ ಅಭಿವೃದ್ಧಿಯ ಅವಶ್ಯಕತೆಗಳು ಅಧಿಕ. ಅವುಗಳ ಸಾಧನಸಂಪತ್ತುಗಳು ಪರಿಮಿತ. ಆದ್ದರಿಂದ ಕೊಲಂಬೋ ಯೋಜನೆಯಂಥ ಅಂತರರಾಷ್ಟ್ರೀಯ ಸಹಕಾರ ಅವಶ್ಯಕ ಹಾಗೂ ಅತ್ಯಂತ ಉಪಯುಕ್ತ.

ಕೊಲಂಬೋ ಯೋಜನೆಯ ಮೂಲಕ ಸಹಾಯ ಎರಡು ಬಗೆಯಲ್ಲಿ ಲಭ್ಯವಾಗುತ್ತದೆ: 1. ಬಂಡವಾಳ ಸಹಾಯ ಮತ್ತು 2. ತಾಂತ್ರಿಕ ಸಹಕಾರ. ಕೊಲಂಬೋ ಯೋಜನೆಯಲ್ಲಿ ಸಹಾಯ ದೊರೆಯಬೇಕಾದರೆ, ಸಹಾಯ ಬೇಕಾದ ರಾಷ್ಟ್ರ ತನಗೆ ಯಾವ ರೀತಿಯ ಸಹಾಯ ಬೇಕೆಂಬುದನ್ನು ತಿಳಿಸಬೇಕು. ಆಗ ಕೊಲಂಬೋ ಯೋಜನಾ ಬ್ಯೂರೊ ಸಹಾಯ ಒದಗಿಸಬಲ್ಲಂಥ ರಾಷ್ಟ್ರಗಳೊಡನೆ ಚರ್ಚಿಸಿ ಸಹಾಯಕೋರುವ ರಾಷ್ಟ್ರಗಳಿಗೆ ಸಹಾಯ ಒದಗಿಸಿಕೊಡುತ್ತದೆ. ನೆರವು ನೀಡುವ, ನೆರವು ಪಡೆಯುವ ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡಿಸಿ ನೆರವು ಹರಿಯುವಂತೆ ಮಾಡುವುದು ಇದರ ವಿಧಾನ. ತಾಂತ್ರಿಕ ಸಹಕಾರ ಮಂಡಲಿ ಆಗಿಂದಾಗ್ಗೆ ಸಭೆ ಸೇರಿ ತಾಂತ್ರಿಕ ಸಹಾಯದ ಬಗ್ಗೆ ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುವುದು.
ಕೊಲಂಬೋ ಯೋಜನೆಯ ಸಮಾಲೋಚನ ಸಮಿತಿ ವರ್ಷಕ್ಕೊಮ್ಮೆ ಸಭೆ ಸೇರಿದಾಗ ಪ್ರತಿಯೊಂದು ಪ್ರದೇಶಕ್ಕೂ ಸಂಬಂಧಪಟ್ಟ ಆರ್ಥಿಕ ಸಮಸ್ಯೆಗಳನ್ನೂ ಇವುಗಳನ್ನು ಪರಿಹರಿಸುವ ಉಪಾಯಗಳನ್ನೂ ಪರಿಶೀಲಿಸಲಾಗುತ್ತದೆ. ಅಭಿವೃದ್ಧಿಹೊಂದಿದ ದೇಶಗಳು ಎಷ್ಟರಮಟ್ಟಿಗೆ ಏಷ್ಯನ್ ರಾಷ್ಟ್ರಗಳಿಗೆ ಬಂಡವಾಳ ಒದಗಿಸಬಲ್ಲವು ಎಂಬುದನ್ನು ತಿಳಿದುಕೊಂಡು ಪ್ರತಿಯೊಂದು ರಾಷ್ಟ್ರಕ್ಕೂ ಸಾಧ್ಯವಾದಷ್ಟು ಮಟ್ಟಿಗೆ ಬಂಡವಾಳ ಸಹಾಯ ದೊರಕಿಸಿಕೊಡಲಾಗುತ್ತದೆ. ಸಹಾಯ ಒದಗಿಸುವ ರಾಷ್ಟ್ರ ಸಹಾಯ ಕೋರುವ ರಾಷ್ಟ್ರದೊಡನೆ ನೇರವಾಗಿ ಮಾತುಕತೆ ನಡೆಸಿ ಸಹಾಯ ಒದಗಿಸುತ್ತದೆ. ಸದಸ್ಯರಾಷ್ಟ್ರಗಳು ಒಂದಕ್ಕೊಂದು ಸಹಾಯ ನೀಡುವುದಲ್ಲದೆ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಕೂಡ ಈ ಪ್ರದೇಶದ ರಾಷ್ಟ್ರಗಳಿಗೆ ಸಹಾಯ ಒದಗಿಸುತ್ತಿವೆ. ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಿಗೆ ಸಾಲ ಅಥವಾ ದಾನ, ಆಹಾರ ಸಾಮಗ್ರಿ, ಗೊಬ್ಬರ, ಯಂತ್ರೋಪಕರಣಗಳು, ಸಾರಿಗೆ ವಾಹನಗಳು, ಪ್ರಯೋಗಾಲಯ ಸಲಕರಣೆಗಳು-ಈ ರೂಪಗಳಲ್ಲಿ ಬಂಡವಾಳ ಸಹಾಯ ದೊರೆಯುತ್ತದೆ.

ತಾಂತ್ರಿಕ ಸಹಾಯವನ್ನು ವಿವಿಧ ರೂಪಗಳಲ್ಲಿ ಒದಗಿಸಲಾಗುತ್ತದೆ. ನಿಪುಣರ ಹಾಗೂ ತಂತ್ರಜ್ಞರ ಸೇವೆ ಒದಗಿಸುವುದು, ಏಷ್ಯನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ಹೆಚ್ಚಿನ ತರಬೇತು ಸೌಕರ್ಯಗಳನ್ನು ಏರ್ಪಡಿಸುವುದು. ಹಿಂದುಳಿದಿರುವ ರಾಷ್ಟ್ರಗಳಲ್ಲಿ ತಾಂತ್ರಿಕ ಶಾಲೆಗಳನ್ನು ಸ್ಥಾಪಿಸಲು ಮತ್ತು ಸಂಶೋಧನೆಗೆ ವಿಶೇಷ ರೀತಿಯ ಸಲಕರಣೆಗಳನ್ನು ನೀಡುವುದು, ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಲು ನೆರವು ನೀಡುವುದು, ಹೀಗೆ ತಾಂತ್ರಿಕ ಸಹಕಾರ ಹೆಚ್ಚಿಸುವುದೂ ಕೊಲಂಬೋ ಯೋಜನೆ ಮಾಡುತ್ತಿರುವ ಕೆಲಸವಾಗಿದೆ.

ಕೊಲಂಬೋ ಯೋಜನೆ ಖಾಯಂ ಯೋಜನೆಯಾಗಿ ಸ್ಥಾಪಿತವಾಗಿಲ್ಲ. 1950ರಲ್ಲಿ ಮೊದಲ ಬಾರಿಗೆ ಇದು ಪ್ರಾರಂಭವಾದಾಗ 1957ಕ್ಕೆ ಕೊನೆಯಾಗಬೇಕೆಂದು ನಿರೀಕ್ಷಿಸಲಾಗಿತ್ತು. ಅನಂತರ 1961ರ ವರೆಗೂ ತದನಂತರ 1967ರ ವರೆಗೂ ಮುಂದುವರಿಸಲಾಯಿತು. ಈಗ 1975ರ ವರೆಗೂ ಯೋಜನೆಯನ್ನು ಮುಂದುವರಿಸಲಾಗಿದೆ.

1950ರಿಂದ 1967ರ ಡಿಸೆಂಬರ್ ವರೆಗೆ 52,329 ವಿದ್ಯಾರ್ಥಿಗಳು ತಾಂತ್ರಿಕ ತರಬೇತು ಪಡೆದಿದ್ದರು. 10,793 ಪರಿಣತರನ್ನೂ 34.28 ಕೋಟಿ ಡಾಲರ್ ಮೌಲ್ಯದ ಉಪಕರಣಗಳನ್ನೂ ಒದಗಿಸಲಾಗಿತ್ತು. ಯೋಜನೆಯನ್ನು ಪ್ರಾರಂಭಿಸಿದಂದಿನಿಂದ 1967ರ ಡಿಸೆಂಬರ್ ವರೆಗೆ ನಡೆಸಿದ ಸಹಕಾರ ಕಲಾಪಗಳ ಒಟ್ಟು ಮೌಲ್ಯ 99 ಕೋಟಿ ಡಾಲರ್. ಇದರಲ್ಲಿ ಸೇ.19 ತರಬೇತು ಪಡೆಯುವವರಿಗೂ ಸೇ.46 ಪರಿಣತರಿಗೂ ಸಲಹೆಗಾರರಿಗೂ ಸೇ.35 ತಾಂತ್ರಿಕ ಉಪಕರಣಗಳಿಗೂ ವೆಚ್ಚವಾಯಿತು.

ಅಭಿವೃದ್ಧಿಶೀಲ ದೇಶಗಳಿಗೆ ಅಭಿವರ್ಧಿಸಿದ ದೇಶಗಳಿಂದ ನೆರವು ಬರುವುದಲ್ಲದೆ, ಅಭಿವೃದ್ಧಿಶೀಲ ದೇಶಗಳೇ ಈಗ ಪರಸ್ಪರ ಸಹಾಯ ನೀಡುತ್ತವೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತ, ಪಾಕಿಸ್ತಾನ, ಬರ್ಮ, ಶ್ರೀಲಂಕಾ, ಫಿಲಿಪೀನ್ಸ್ ಮತ್ತು ದಕ್ಷಿಣ ಕೊರಿಯ ಇತರ ಸದಸ್ಯ ರಾಷ್ಟ್ರಗಳಿಗೆ ಸಹಾಯ ಒದಗಿಸುತ್ತವೆ ಭಾರತ ಆರ್ಥಿಕವಾಗಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿ ಬಂದರೂ ಇತರ ಸದಸ್ಯರಾಷ್ಟ್ರಗಳಿಗೆ ಕೊಡುತ್ತಿರುವ ಸಹಾಯವನ್ನು ಪ್ರತಿವರ್ಷವೂ ಹೆಚ್ಚಿಸಿಕೊಂಡು ಹೋಗುತ್ತಿದೆ. 1966ರ ಕೊನೆಯ ವೇಳೆಗೆ ಭಾರತ 3,407 ವಿದ್ಯಾರ್ಥಿಗಳಿಗೆ ತಾಂತ್ರಿಕಜ್ಞಾನ ಪಡೆಯಲು ಅವಕಾಶ ಮಾಡಿಕೊಟ್ಟಿತು. ಆಫ್ಘಾನಿಸ್ತಾನ, ಬರ್ಮ, ಕಾಂಬೋಡಿಯ, ಶ್ರೀಲಂಕಾ, ಇಂಡೊನೇಷ್ಯ, ದಕ್ಷಿಣ ಕೊರಿಯ, ಲಾವೋಸ್, ಮಲಯ, ನೇಪಾಳ, ಪಾಕಿಸ್ತಾನ, ಥೈಲೆಂಡ್, ದಕ್ಷಿಣ ವಿಯೆಟ್ನಾಂ ಮತ್ತು ಅನೇಕ ಆಫ್ರಿಕನ್ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಭಾರತಕ್ಕೆ ಬಂದು ತಾಂತ್ರಿಕಜ್ಞಾನ ಪಡೆದಿದ್ದಾರೆ. ಭಾರತದ ವಿಜ್ಞಾನಿಗಳು ಮತ್ತು ತಜ್ಞರು ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಸಕ್ಕರೆ, ಉಕ್ಕು ಮತ್ತು ಕಬ್ಬಿಣ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಯಲ್ಲಿ, ಜಾನುವಾರು ಅಭಿವೃದ್ಧಿ ಯೋಜನೆಯಲ್ಲಿ, ವಿದ್ಯಾ ಸಂಸ್ಥೆಗಳ ಸ್ಥಾಪನೆಯಲ್ಲಿ ಮತ್ತು ಜನಗಣತಿ ಕಾರ್ಯದಲ್ಲಿ ಸಹಾಯ ಮಾಡಿದ್ದಾರೆ. ನೇಪಾಳ ಮತ್ತು ಭೂತಾನಗಳಿಗೆ ಭಾರತ ಅಧಿಕ ಸಹಾಯ ನೀಡಿದೆ. ಇದಲ್ಲದೆ ಕಾಂಬೋಡಿಯ, ಥೈಲೆಂಡ್ ಮತ್ತು ಶ್ರೀಲಂಕಾಗಳಿಗೂ ಸಹಾಯ ನೀಡಿದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಹಾಯ ಮಾಡಲು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಈಚೆಗೆ ಸ್ಥಾಪಿತವಾಗಿದ್ದರೂ ಕೊಲಂಬೋ ಯೋಜನೆ ಎಷ್ಯದ ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಬಹಳ ಉಪಯುಕ್ತವಾದ ಮತ್ತು ಪರಿಣಾಮಕಾರಿಯಾದ ಪಾತ್ರ ವಹಿಸಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯನ್ ರಾಷ್ಟ್ರಗಳಲ್ಲಿ ಕೃಷಿ ಅಭಿವೃದ್ಧಿ ಸಾಧ್ಯವಾಗಿರುವುದು ಬಹುತೇಕ ಈ ಯೋಜನೆಯ ಪರಿಣಾಮ. ಭಾರತ, ಪಾಕಿಸ್ತಾನ ಮತ್ತು ನೇಪಾಳಗಳಲ್ಲಿ ಗೋದಿ ಉತ್ಪಾದನೆಯಲ್ಲಿ ಸಾಧಿಸಿರುವ ವಿಕ್ರಮ, ಫಿಲಿಪೀನ್ಸ್ ಮತ್ತು ಶ್ರೀಲಂಕಾಗಳಲ್ಲಿ ಬತ್ತದ ಉತ್ಪಾದನೆಯಲ್ಲಿ ಸಾಧಿಸಿರುವ ಪ್ರಗತಿ, ಲಕ್ಷಾಂತರ ಟನ್‍ಗಳಷ್ಟು ಆಹಾರ ಧಾನ್ಯಗಳನ್ನು ಸಾಗಿಸಲು ಮತ್ತು ದಾಸ್ತಾನಿಸಲು ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ವಿಯೆಟ್‍ನಾಂಗಳಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಬೃಹತ್ ನೀರಾವರಿ ಯೋಜನೆಗಳು-ಇವು ಕೊಲಂಬೋ ಯೋಜನೆಯ ಮಹತ್ಸಾಧನೆ ಎಂದು ಹೇಳಬಹುದು.

ಪ್ರಪಂಚದ ನಾಲ್ಕನೆಯ ಒಂದು ಭಾಗ ಜನಸಂಖ್ಯೆ ಪಡೆದಿರುವ ಈ ರಾಷ್ಟ್ರಗಳ ವರಮಾನ ಮತ್ತು ಉತ್ಪಾದನೆಯನ್ನು ಹೆಚ್ಚಿಸಿರುವುದರಲ್ಲಿ ಕೊಲಂಬೋ ಯೋಜನೆಯ ಪಾತ್ರ ಗಣನೀಯವಾಗಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯನ್ ರಾಷ್ಟ್ರಗಳ ಜನ ತಮ್ಮ ಅಭಿವೃದ್ಧಿ ಸಾಧಿಸಲು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳ ಜನರ ಬಡತನದ ನಿವಾರಣೆಗೆ ಸಹಾಯ ನೀಡುವುದರಲ್ಲಿ ಮತ್ತು ಈ ಜನರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿ ಅವರ ಅಭ್ಯುದಯ ಸಾಧಿಸುವಂತೆ ಮಾಡುವುದರಲ್ಲಿ ಕೊಲಂಬೋ ಯೋಜನೆಯ ಪಾತ್ರ ಮುಖ್ಯವಾದ್ದು. 			 	 (ಎನ್.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ